ಸಕೀನಾಳ ಮುತ್ತು [Sakeenala Muttu] by Vivek Shanbhag


ಸಕೀನಾಳ ಮುತ್ತು [Sakeenala Muttu]
Title : ಸಕೀನಾಳ ಮುತ್ತು [Sakeenala Muttu]
Author :
Rating :
ISBN : -
Language : Kannada
Format Type : Paperback
Number of Pages : 145
Publication : First published January 1, 2021

ಯಾವ ಅನುಭವವೂ ಪ್ರಾಂಜಲವಲ್ಲದ, ಎಲ್ಲ ಬಗೆಯ ಗ್ರಹಿಕೆಗಳೂ ಕಲುಷಿತಗೊಂಡ ಈ ಸತ್ಯೋತ್ತರ ಕಾಲದಲ್ಲಿ, ಕತೆಯನ್ನು ನಂಬು ಕತೆಗಾರರನ್ನಲ್ಲ ಎಂಬ ಪ್ರಸಿದ್ಧೋಕ್ತಿಯನ್ನು ತುಸು ಬದಲಿಸಿ ಕಥನವನ್ನು ನಂಬು ಕತೆಯನ್ನಲ್ಲ ಎಂದೂ ಹೇಳಬಹುದೇನೋ. ಈ ಕಾದಂಬರಿ ಅಂಥ ಸೂಚನೆ ಕೊಡುವಂತಿದೆ - ಇಲ್ಲಿ ಏನೋ ಒಂದು ನಡೆದು ಅದಕ್ಕೆ ಕುಣಿಕೆ ಹಾಕಿ ಮತ್ತೇನೇನೋ ನಡೆಯುತ್ತ ಸಾಗುತ್ತದೆ. ಆದರೆ ಕಾದಂಬರಿಯಿರುವುದು ನಡೆದಿದ್ದರ ಬಗ್ಗೆಯೋ ಅಥವಾ ನಡೆಯಿತೆಂದು ಗ್ರಹಿಸಲಾಗಿದ್ದರ ಬಗ್ಗೆಯೋ ಅಥವಾ ನಡೆಯಬಹುದಾದ ಸಾಧ್ಯತೆಗಳ ಬಗ್ಗೆಯೋ - ಇಂಥ ಪ್ರಶ್ನೆಗಳು ಈ ಕಾದಂಬರಿಯಲ್ಲಿ ಓದುಗನೆಂಬ ವಿಕ್ರಮನನ್ನು ಬೇತಾಳಗಳಾಗಿ ಕಾಡುತ್ತವೆ. ಹಾಗೆ ಕಥೆ ಕಾಣುವ ಮೂಲಕ ಓದುಗರಿಗೆ - ಸ್ವತಃ ಲೋಕವೇ ಹಾಗಿರಬಹುದೆ, ಸ್ಥಿರವೂ ನಿಶ್ಚಿತವೂ ಎಂದು ನಾವು ತಿಳಿದ ಈ ಜೀವನವ್ಯಾಪಾರಗಳು ಕೇವಲ ಮನೋನಿರ್ಮಿತಿಗಳೆ? - ಎಂಬೊಂದು ಗುಮಾನಿ ಉದ್ಭವಿಸಿದರೆ ಅದು ಕಾಕತಾಳೀಯವಾಗಿರಲಾರದೇನೋ...


ಸಕೀನಾಳ ಮುತ್ತು [Sakeenala Muttu] Reviews


  • Nayaz Riyazulla

    ಕೆಲವರ ಮೋಡಿಯೇ ಹಾಗೆ, ಅವರ ಪುಸ್ತಕಗಳು ಎಂದರೆ, ಅದರಲ್ಲೂ ಹೊಸ ಪುಸ್ತಕವೆಂದರೆ ಬೇಗ ಓದಿಬಿಡಬೇಕು ಎನ್ನುವ ತುಡಿತ. ಹೀಗೆ pre-book ಮಾಡಿ ತರಿಸಿಕೊಂಡು, ಒಂದೇ ಗುಕ್ಕಿನಲ್ಲಿ ಓದಿದ ಪುಸ್ತಕ ವಿವೇಕ ಶಾನಭಾಗರ "ಸಕೀನಾಳ ಮುತ್ತು"

    ಇದು ಪ್ರಸ್ತುತ ಕಾಲಗಟ್ಟದ ಕಾದಂಬರಿ. ಇಲ್ಲಿ ಮನೆಯೊಳಗೇ ಎರಡು ಗುಂಪುಗಳಿವೆ, ಆ ಗುಂಪುಗಳಿಗೆ ಯಾರದೋ influence ಇದೆ. ಅವರೇ ಸರಿ ಎನ್ನುವ ಹುಚ್ಚು ಭಕ್ತಿಯಿದೆ. ತೀರ ಹಚ್ಚಿಕೊಂಡು ಮನೆಯವರನ್ನೇ ದ್ವೇಷಿಸುವ ಕರಾಳ ಮನವು ಇದೆ. ಆ ಕರಾಳತೆ ಜೀವನದ ನೆಮ್ಮದಿಯನ್ನೇ ಹೇಗೆ ಹಾಳುಗೆಡುವುತ್ತದೆ ಎಂಬುದನ್ನು ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಲೇಖಕರು ಮಂಡಿಸಿದ್ದಾರೆ

    ವಿವೇಕರ ಹಿಂದಿನ ಕಥೆಗಳಂತೆ ಇಲ್ಲೂ ನಿಗೂಢ ಪಾತ್ರಗಳಿವೆ, ಆ ಪಾತ್ರಗಳ ಒಟ್ಟು ಕ್ಯಾನ್ವಾಸ್ ನಮಗೆ ಸಿಗುವುದೇ ಇಲ್ಲ, ಸಿಗುವ ತುಡಿತ ಉಚ್ಚಾಯ ಸ್ಥಿತಿಯಲ್ಲಿದ್ದರೂ ಕೈಗೆ ಸಿಗದೇ ತಲೆಗೆ ಹುಳ ಬಿಡುವುದು ವಿವೇಕರ ಶಕ್ತಿ. ಇಲ್ಲಿ ಒಂದಲ್ಲ , ಹಲವು ಪಾತ್ರಗಳು ಮತ್ತು ಸನ್ನಿವೇಶಗಳಿದ್ದು, ವಿಕ್ರಮ ಬೇತಾಳದ ಕಥೆಯಂತೆ ನಮ್ಮ ಹೆಗೆಲೇರುತ್ತದೆ , ಬುದ್ದಿವಂತರಾಗಿದ್ದರೆ ನಾವೇ ವಿಕ್ರಂರಾಗಬೇಕಷ್ಟೆ.

    ಇಲ್ಲಿ ಏನೋ ನಡೆದಿದೆ, ಅದಕ್ಕೆ ಮುಂಚೆ ನಡೆದ ಘಟನೆಗಳಿಗೆ ತಳುಕು ಹಾಕಿ ನೋಡುವಂತೆ ಮಾಡುವ ವಿವೇಕರ ಬರವಣಿಗೆ ನೂರಕ್ಕೆ ನೂರರಷ್ಟು ಗೆದ್ದಿದೆ. ನನಗೆ ಇನ್ನೂ ಇಷ್ಟವಾಗಿದ್ದು ಕಾದಂಬರಿಯ ಶೀರ್ಷಿಕೆ ತೆರೆದುಕೊಳ್ಳುವ ಪರಿ, ಅಲ್ಲಿಂದ ಕಥೆಯ ವೇಗ ಹೆಚ್ಚುತ್ತದೆ. ಇದೇ ಅನುಭವ ಘಾಚರ್ ಘೋಚರ್ ನೀಳ್ಗಥೆ ಓದುವಾಗ ಆಗಿತ್ತು.

    ಪುಸ್ತಕವನ್ನು ಓದಿ ಕಪಾಟಿನಲ್ಲಿ ಇಟ್ಟು ಮರೆತುಬಿಡುವ ಪುಸ್ತಕದ ವರ್ಗಕ್ಕೆ ಸೇರುವ ಪುಸ್ತಕವಲ್ಲವಿದು. ಓದಿ ಇಲ್ಲದ ಯಾವುದೋ ವಿವರಗಳನ್ನು ಹುಡುಕಿ ನಮ್ಮ ದೃಷ್ಟಿಕೋನದಲ್ಲಿ ಬರೆದು ಮುಗಿಸೋಣ ಅನ್ನಿಸುತ್ತೆ.

    ಕಥೆಯ ಒಂದು ಸನ್ನಿವೇಶ ಅಥವಾ ಪಾತ್ರದ ಬಗ್ಗೆ ಇಲ್ಲಿ ಬರೆದರೂ, ಇದು ಕಥೆಯನ್ನು ಹಾಳುಗೆಡುವುತ್ತದೆ ಎನ್ನುವ ಭಯದಲ್ಲೇ ಬರೆಯುವಷ್ಟು ವಿಶಾಲವಾಗಿ ಈ ಕಾದಂಬರಿ ನನ್ನ ಮನದಲ್ಲಿ ಹರಡಿದೆ

    ಒಂದೇ ತರಹದ ಪುಸ್ತಕಗಳನ್ನು ಓದಿ, ಏನನ್ನೋ ಹೊಸತು ಹುಡುಕುವ ಓದುಗರಿಗೆ ಇದು ಈಗಷ್ಟೆ ಮಾಡಿಟ್ಟ ಬಿಸಿ ಬಿಸಿಯಾದ ಜಿಲೇಬಿ.

  • Prashanth Bhat

    ಸಕೀನಾಳ ಮುತ್ತು - ವಿವೇಕ ಶಾನಭಾಗ.

    ಬಹುಶಃ ಕನ್ನಡದಲ್ಲಿ ಬರೆಯುತ್ತಿರುವ ಲೇಖಕರಲ್ಲಿ ಜಾಗತಿಕ ಲೇಖಕ (ಇಂಟರ್ನ್ಯಾಷನಲ್ ರೈಟರ್) ಎಂದು ಗುರುತಿಸುವುದಾದರೆ ವಿವೇಕ ಶಾನಭಾಗ ಮೊದಲ ಸಾಲಿನಲ್ಲಿ ಬರುತ್ತಾರೆ. ಅವರ ಕಥನಗಳ ಇಂತಹುದೇ ಮಣ್ಣಿನದು ಎಂದು ವರ್ಗೀಕರಣ ಮಾಡದೆ ಎಲ್ಲಿಗೆ ಬೇಕಾದರೂ ಸೇರಿಸಬಹುದು.
    ಅಭಿವೃದ್ಧಿ ತಂದ ಏಕಾಕಿತನ, ತನ್ನತನದ ಹುಡುಕಾಟ, ಅಭದ್ರತೆ ಸಾರ್ವತ್ರಿಕ ಎನ್ನಬಹುದಾದ ಸಮಸ್ಯೆಗಳಲ್ಲವೇ?
    ಬಹುಶಃ ಈ ಕಾರಣಕ್ಕೇ ' ಘಾಚರ್ ಘೋಚರ್' ಅನುವಾದಗೊಂಡು ವಿಶ್ವಮನ್ನಣೆ ಪಡೆದದ್ದು. ಈ ಜಾಗತಿಕ ಬರವಣಿಗೆ ಯಾವ ಪಂಥಕ್ಕೂ ಸೇರದಿದ್ದರೂ ತುಸುವಾಗಿ ಎಡದ ಕಡೆ ಬಾಗಿರುವ ಕೋನವುಳ್ಳದ್ದು‌. ಅದು ಸರ್ಜನಶೀಲ ಬರವಣಿಗೆಯ ನಂಬಿದ ತೊಂಬತ್ತೈದು ಶೇಕಡಾ ಬರಹಗಾರರ ಕಥೆಯೇ..
    ಇನ್ನೊಂದು ನಾನು ಗಮನಿಸಿದ ಅಂಶ. ವಿವೇಕರು ಪ್ರತಿಯೊಂದು ಶಬ್ದ ಬಳಸುವಾಗಲೂ ಅಳೆದೂ ತೂಗಿ 'ಇದು ಬೇಕಾ? ಇದು ಬೇಡವೇ? ' ಎಂದು ಯೋಚಿಸಿ ಬರೆದ ಹಾಗಿರುತ್ತದೆ. ಹಾಗಾಗಿ ಸೂಕ್ಷ್ಮವಾಗಿ ಗಮನಿಸಿದಾಗ ಅವರ ಬರವಣಿಗೆ ನದಿಯ ಹರಿವಿನ ಹಾಗಿರದೆ ಎಚ್ಚರದಿಂದ ವಿನ್ಯಾಸಗೊಳಿಸಿದ ಕಟ್ಟಡದ ಹಾಗೆ ಭಾಸವಾಗುತ್ತದೆ.
    ಪ್ರಸ್ತುತ ಪುಟ್ಟ ಎನ್ನಬಹುದಾದ ಈ ಕಾದಂಬರಿ ತನ್ನ ಮುಖಪುಟ್ಟಕ್ಕೆ ಅನ್ವರ್ಥವಾಗಿದೆ. ಅವರ ಬರವಣಿಗೆ ಓದುತ್ತಾ ಬಂದವರಿಗೆ ಇದು 'ಇನ್ನೂ ಒಂದು ' ಎಂಬ ಕಿರು ಕಾದಂಬರಿಯ ಮುಂದುವರೆದ ಆವೃತ್ತಿಯ ಹಾಗೆ ಭಾಸವಾಗುತ್ತದೆ. ನಡುವೆ ' ಒಂದು ಬದಿ ಕಡಲು' ' ಊರು ಭಂಗ' ದ ಛಾಯೆ ಇದೆ. ಕಾರ್ಪೋರೆಟ್ ಕಲ್ಚರ್‌ನ ಪೆಯಿಂಟ್ ಕೂಡ ಅದೇ ತೆರನಾದದ್ದು.
    ಅಂದರೆ ಹೊಸದೇನೋ ಹಾಡ ಹೊರಟ ಗಾಯಕ ತನ್ನ ಎಂದಿನ ಆಲಾಪಕ್ಕೆ ಮರಳುವ ಹಾಗೆ..
    ವಿವೇಕರ ಈ ಕಾದಂಬರಿ ದೂರದಿಂದ ನೋಡಿದಾಗ ಪರಸ್ಪರ ದುರ್ಬಲ ಕುಣಿಕೆಗಳ ಘಟನೆಗಳ ಸಂಕಲನದಂತೆ ಭಾಸವಾದರೂ ,ಅವುಗಳ ಸತ್ಯಾಸತ್ಯತೆ ಓದುಗರ ಗ್ರಹಿಕೆಗೆ ಬಿಟ್ಟರೂ ಕೊಂಚ ದೂರದಿಂದ ನೋಡಿದಾಗ ಬದುಕಿನ ಅಸಂಬದ್ಧಗಳ ಮೊತ್ತವಾಗಿ ಕಾಣುತ್ತದೆ.
    ಮಗಳ ನಿಯಂತ್ರಿಸಲಾಗದ ಅಪ್ಪ, ದುರ್ಬಲ ಗಂಡನಂತೆ ಭಾಸವಾದರೂ ಅವನಿಗೆ ಆಯ್ಕೆಗಳಿತ್ತೇ ಎಂಬುದು ಸಂಶಯ, ಸಂಸಾರಸ ಕುಣಿಕೆ ತನ್ನ ಕೈಲಿ ಎಂದು ಅಂದುಕೊಂಡಿರುವಂತೆ ಕಾಣುವ ಪತ್ನಿ ತನ್ನ ಒಳಗಿನ ಪ್ರಶ್ನೆಗಳ ಭಯದ ಸುತ್ತ ಕಟ್ಟಿದ ಪೊರೆ ಗೋಚರಿಸಿ ಅದು ಹರಿವ ಘಟನೆಗಳೂ ನಡೆಯುತ್ತವೆ. ಇನ್ನು ಮಗಳಂತೂ ಆಧುನಿಕ ಫೆಮಿನಿಸ್ಟ್‌ಗಳ ಪ್ರತಿರೂಪ. ಸ್ವತಂತ್ರ ಆಲೋಚನೆಯ ನೆಪದಲ್ಲಿ ಆಕೆ ಮಾಡುವ ಹುಚ್ಚಾಟಗಳು ತನ್ನ ನಿರ್ಧಾರಕ್ಕೆ ತಾನು ಸ್ವತಂತ್ರ ಎನ್ನುವ ಹುಡುಗಿಯ ಆರ್ಥಿಕ ಅವಲಂಬನೆ ತಂದೆ ತಾಯಿಯರ ಮೇಲಿದೆ ಎಂಬ ಸೆನ್ಸ್ ಕೂಡ ಇಲ್ಲವಾದದ್ದು. ಅಪ್ಪನ ಎದುರು ಸೆಟೆವ ಈ ಪಾತ್ರ ನನಗೆ ವಸ್ತುನಿಷ್ಟವಾಗಿ ನೋಡಲು ಬಹಳ ಕಷ್ಟ ಕೊಟ್ಟ ಪಾತ್ರ.

    ಕೃತಿ ಓದಿ ಮುಗಿಸಿದ ಮೇಲೆ ನನಗನಿಸಿದ್ದು ಈ ಇಡೀ ಕಾದಂಬರಿ ಗಂಡನ ಗ್ರಹಿಕೆಯಲ್ಲಿ ನಿರೂಪಿತ. ಹಾಗಾಗಿ ಇದನ್ನೇ ಹೆಂಡತಿಯ ಅಥವಾ ಮಗಳ ದೃಷ್ಟಿಯಿಂದ ಬರೆದಿದ್ದರೆ ಅಥವಾ ರಮಣನ ಕಣ್ಣಿಂದ ಬರೆದಿದ್ದರೆ ಇಡಿಯ ಕಥೆಯೇ ಬದಲಾಗಿ ಕಾಣುವ ಕೆಲೆಡಿಯೋಸ್ಕೋಪ್ ತರಹದ ಗುಣವುಳ್ಳದ್ದು ಅನಿಸಿತು.

    ಆದರೆ 67ನೇ ಪುಟದ ಕೊನೆಗೆ ಗಂಡನ ಗ್ರಹಿಕೆಯ ‌ಬರೆಯುವಲ್ಲಿ ವಿವೇಕರು ಕೊಂಚ ಸಸ್ಪೆನ್ಸ್ ಕಾದುಕೊಳ್ಳಲು ಹೋಗಿ ಎಡವಿದರು ಅನಿಸಿತು. ಇಡೀ ಕೃತಿಯಲ್ಲಿ ತನ್ನ ಮನೋವ್ಯಾಪಾರಗಳ ತಿಳಿಸುವ ಗಂಡ ಇಲ್ಲಿ ಪೋನ್ ಮೂಲಕ ಒಡೆವುದು ಲೇಖಕ ಮಧ್ಯಪ್ರವೇಶದ ಕೃತಕತೆ ಅನಿಸಿತು. ಇದಲ್ಲದೆ ಇಷ್ಟೆಲ್ಲ ಅಳೆದೂ ತೂಗಿ ನಿಜ ಜೀವನದಲ್ಲಿ ಯಾವ ಅಪ್ಪ ಅಮ್ಮ ಮಾತಾಡುತ್ತಾರೆ,ವರ್ತಿಸುತ್ತಾರೆ ಎಂದೂ ಅನಿಸಿತು.

    ನಿಸ್ಸಂಶಯವಾಗಿ ಇದು ಇತ್ತೀಚೆಗೆ ಬಂದ ಕಾದಂಬರಿಗಳಲ್ಲೇ ವಿಶಿಷ್ಟ. ಮತ್ತು ಮತ್ತೆ ಮತ್ತೆ ಓದಿದಾಗ ಮತ್ತೆ ನೋಡಿದಾಗ ಕಾಣದ ವಿವರಗಳ ಬಿಟ್ಟುಕೊಡುವ ಸುಂದರ ಹೆಣ್ಣಿನ ಮೈಕಟ್ಟಿನ ತರಹದ್ದು. ಅದಲ್ಲದೆ ಇದರ ಸಾರ್ವತ್ರಿಕ ಗುಣ ಯಾವ ದೇಶಕ್ಕೂ ಸಲ್ಲುವಂತಹದ್ದು.
    ಓದಿ ಮುಗಿಸಿದಾಗ ಇಷ್ಟು ದಿನ ಕಾಯಿಸಿ ಇಷ���ಟೊಳ್ಳೆ ಗಟ್ಟಿ ಕಾದಂಬರಿ ಕೊಟ್ಟ ವಿವೇಕರು ಮೆಚ್ಚುಗೆಯಾದರು.
    ನನಗೆ ಒಂದೇ ಸಂಶಯ. ಇದನ್ನು ಅನುವಾದಿಸುವುದಾದರೆ ಆ ಟೈಟಲ್‌ನ ಅದರ ಅರ್ಥದ ಸಹಿತ ಹೇಗೆ ಅನುವಾದಿಸಬಹುದು ಎಂದು.
    ಬಹುಶಃ ' ಘಾಚರ್ ಘೋಚರ್' ತರಹವೇ ಕಾದಂಬರಿ ಓದದಿದ್ದರೆ ನಿಮಗೆ ನಾನು ಏನು ಹೇಳುತ್ತಿದ್ದೇನೆ ಎಂಬುದು ಅರ್ಥವಾಗಲಿಕ್ಕಿಲ್ಲ.
    ಹಾಗಾಗಿ ಓದಿ ನೋಡಿ.

  • That dorky lady

    Spoiler alert- ಇದರಲ್ಲಿ‌ ಸಕೀನಾಳೂ ಇಲ್ಲ ಮುತ್ತೂ ಇಲ್ಲ! ಮತ್ತೇನು ಓದುವುದು ಎಂದರೆ... ಬಹಳಷ್ಟಿದೆ.
    ಕೆಲವು ಕತೆಗಳು ಪೂರ್ಣ ಅಪರಿಚಿತ ಪರಿಸರದ ಘಟನಾವಳಿಗಳಾಗಿದ್ದು ಓದುವಾಗ ಸಂಪೂರ್ಣವಾಗಿ ಹೊಸತೊಂದು ಲೋಕಕ್ಕೆ ಒಯ್ದು ಓದಿನ ಖುಷಿ ಕೊಟ್ಟರೆ ಮತ್ತೆ ಕೆಲವು - ಈ ಸಕೀನಾಳ ಮುತ್ತಿನಂತವು ಪದೇಪದೇ ನಮ್ಮದೇ ನೆನಪಿನ ತಿಜೋರಿ ಕೆದಕಿ ಕಚಗುಳಿ ಇಡುತ್ತವೆ.

    ವೆಂಕಟನ ಸ್ವಭಾವ ಮಧ್ಯಮವರ್ಗದ; ಅತಿ ಸಾಧಾರಣ ಕನಸುಗಳನ್ನು ಹೊತ್ತ, ಜೀವನದಲ್ಲಿ ಏರಬಹುದಾದ ಎತ್ತರಕ್ಕಿಂತಲೂ ಕೈಕಾಲು ಚಾಚಬಹುದಾದ ವಿಶಾಲ ಜಾಗಕ್ಕೆ, ಹೆಚ್ಚೇನೂ ಆಚೀಚೆಯಾಗದ ಕಂಫರ್ಟಿಗೆ ಮಹತ್ವಕೊಡುವ ನಮ್ಮನಡುವೆ ಸರ್ವೇಸಾಮಾನ್ಯವಾಗಿ ಕಂಡುಬರುವ 'ಮೇಲ್'ವರ್ಗದ ಸ್ಪಷ್ಟ ಚಿತ್ರಣ.
    ಲಾಲಿಸಿ ಬೆಳೆಸಿದ ಮಗು ತನ್ನದೇ ಸ್ವತಂತ್ರ ವ್ಯಕ್ತಿತ್ವ ಹೊಂದುತ್ತಿದ್ದಂತೆ ಅವಳೊಂದಿಗೆ ಹೊಸಯುಗದ ಓಘಕ್ಕೆ ಒಗ್ಗಿಕೊಳ್ಳಲು ಒದ್ದಾಡುತ್ತಾ, ತಂದೆತನದ ಹಿಡಿತ ಕೈತಪ್ಪಿ ಹೋದಂತೆ, ಮಗಳು ದೂರವೇ ಆದಂತೆ ಆತಂಕಗೊಳ್ಳುತ್ತಾ ಆ ದೂರಕ್ಕೆ ಸೇತುವೆ ಹೊಸೆಯಲು ಸೋಲುತ್ತಾ, ಮತ್ತೆ ಪ್ರಯತ್ನಿಸುತ್ತಾ ಬಹಳಷ್ಟು ಸಾರಿ ನನ್ನದೇ ಅಪ್ಪನಂತೆ ಕಂಡಿದ್ದು ಸುಳ್ಳಲ್ಲ. (ಮಗಳ ಅಪ್ಪಂದಿರಲ್ಲೆಲ್ಲಾ ನನ್ನಪ್ಪನೇ ಕಾಣುವುದೊಂದು ಮಜ)

    ಬರೀ ವೆಂಕಟನ ನರೇಟಿವ್ನಲ್ಲೇ ಇಡೀ ಕಾದಂಬರಿ ನಡೆಸಿದ್ದು ರೇಖಾಳಿಗೂ ವಿಜಿಗೂ ಮೋಸವಾಯ್ತು ಎನಿಸಿತು. ಹಾಗಾಗದಂತೆ ತಡೆಯಲೇ ಬಹುಶಃ ಕಾದಂಬರಿಯ ಅಂತ್ಯವನ್ನು ಅನಂತ ಸಾಧ್ಯತೆಗಳೊಂದಿಗೆ ಓದುವ ನಮ್ಮದೇ ಜವಾಬ್ದಾರಿಯಾಗಿಸಿದ್ದಾರೋ ಏನೋ.... ವಿವೇಕರ ಇತರೆ ಕಾದಂಬರಿಗಳಂತೆಯೇ ಇದೂ ಕೂಡ ಒಂದಷ್ಟು ಪ್ರಶ್ನೆಗಳನ್ನು ಉಳಿಸಿಯೇ ಮುಗಿಯಿತು.

  • Shrilaxmi

    ಓದಿ ಮುಗಿಸಿದಾಗ ಕಥೆ ಅನಿರೀಕ್ಷಿತವಾಗಿ, ಅಪೂರ್ಣವಾಗಿ ನಿಂತಂತೆ ಅನಿಸಿತ್ತು. ಆದರೆ ನಂತರ percolate ಆಗುತ್ತಾ ಹೋದಂತೆ, ಅಪೂರ್ಣ ಪಾತ್ರಗಳು, ತಿರುವು��ಳ, ಅಗಾಧ ಸಾಧ್ಯತೆ ಒಂದು ವಿಚಿತ್ರ closure ಅನ್ನೂ ಕೊಟ್ಟಿತು.

  • jayaramchari ಜಯರಾಮಚಾರಿ

    ವಿವೇಕ ಶಾನಭಾಗ ನನ್ನ ಇಷ್ಟದ ಈ ಕಾಲದ ಕಾದಂಬರಿಕಾರ. ಓದಿರುವುದು ಬರಿ ಊರು ಭಂಗ ಹಾಗು ಘಾಚರ್ ಘೋಚರ್ ಆದರೂ ,ಎಲ್ಲಾದರು ವಿವೇಕ ಶಾನಭಾಗ ಹೆಸರು ನೋಡಿದರೆ ತಟ್ಟನೆ ನಿಲ್ಲಿಸಿ ಓದುತ್ತೇನೆ. ಯು ಟ್ಯೂಬಿನಲ್ಲಿ ಅವರ ಮಾತು ಕೂಡ ಸಿಗುತ್ತೆ, ಅವರೇ ಸಂಪಾದಿಸಿರುವ ತುಂಬಾ ಒಳ್ಳೆ ಒಳ್ಳೆ ಬರಹಗಳುಳ್ಳ ಅವರ ದೇಶಕಾಲದ ಅಷ್ಟು ಸಂಚಿಕೆ ಓದಲು ಶುರುಮಾಡಿದ್ದೇನೆ.

    ವಿವೇಕ ಶಾನಭಾಗ ಯಾಕೆ ಇಷ್ಟವಾಗಿಬಿಡುತ್ತಾರೆ ಎಂದು ಪದಗಳಲ್ಲಿ ಹೇಳೋದು ಕಷ್ಟ, ಅವರ ಕಾದಂಬರಿಯಲ್ಲಿ ಬರುವ ತಾಕಲಾಟಗಳು ದ್ವಂದ್ವಗಳು ಇಲ್ಲೇ ಎಲ್ಲೋ ನೋಡಿದಂತೆ ಇರುತ್ತವೆ ಇಲ್ಲ ಥೇಟು ಅನುಭವಿಸಿದಂತಿರುತ್ತವೆ, ಊರು ಭಂಗಕ್ಕಿಂತ ಘಾಚರ್ ಘೋಚರ್ ಸಕತ್ ಮಜಾ ಕೊಟ್ಟಿತ್ತು. ಘಾಚರ್ ಘೋಚರ್ ಎಂದರೆ ಏನು ಎಂದು ಬರುವ ದೃಶ್ಯದಲ್ಲಂತೂ ಸಕತ್ ಮಜ್ ಕೊಟ್ಟಿತ್ತು. ಅವರ ಲೇಟೆಸ್ಟ್ ಕಾದಂಬರಿ ಸಕೀನಾಳ ಮುತ್ತು ಈಗಷ್ಟೇ ಓದಿ ಮುಗಿಸಿದೆ. ಈ ಕಾದಂಬರಿ ಬಂದಾಗ ವಿವೇಕ ಶಾನಭಾಗ ಓದಿಕೊಂಡವರೆಲ್ಲ ಸ್ವಲ್ಪ ಬೇಸರ ವ್ಯಕ್ತ ಪಡಿಸಿದ್ದ್ದರು ಒಬ್ಬರಂತೂ ಇದು ಓದಲು ಲಾಯಕ್ಕಿಲ್ಲ ಎಂದು ಫೇಸ್ ಬುಕ್ಕಲ್ಲಿ ನೋಡಿದ್ದೇ. ಫೇಸ್ ಬುಕ್ ಸದ್ಯ ವ್ಯಕ್ತಿ ಅಭಿಪ್ರಾಯದ ಕಸದ ಡಬ್ಬಿ, ಅವರಿಗೆ ಕಂಡದ್ದು ಅರಿವಾಗಿದ್ದೆ ಸತ್ಯ ಅಂತ ಬಡಬಡಾಯಿಸುವಾಗ ಅವರ ಅಭಿಪ್ರಾಯ ಓದಿ ಸುಮ್ಮನೆ ಒಡದ್ದಿದರೆ ಹೇಗೆ ಅನಿಸಿ ಓದತೊಡಗಿದೆ

    ಊರು ಭಂಗ - ಘಾಚರ್ ಘೋಚರ್ ಕಾದಂಬರಿಗಳಿಗೆ ಹೋಲಿಸಿಕೊಂಡರೆ ಕತೆ ಅಷ್ಟರಲ��ಲೇ ಇದೆಯಾದರೂ, ಕಥನ ನನಗೆ ಇಷ್ಟ ಆಯ್ತು, ಹಳೆಯ ಕಾದಂಬರಿಗಳಿಗೆ ಹೋಲಿಸಿಯೇ ನಾವು ಹೊಸ ಕಾದಂಬರಿ ಯಾಕೆ ಓದಬೇಕು ? ಅದು ಇನ್ನು ಗೊತ್ತಿಲ್ಲ. ಈ ಕಾದಂಬರಿಯಲ್ಲೂ ವಿವೇಕ ಶಾನಭಾಗರ ಟಿಪಿಕಲ್ ಸ್ಟೈಲ್ ಇದೆ ಬೆರಗಾಗಿಸೋ ದೃಶ್ಯಗಳಿವೆ, ವ್ಯಕ್ತಿತ್ವ ವಿಕಸನ ಪುಸ್ತಕಗಳಿಂದ ವ್ಯಕ್ತಿ ಬದಲಾಗನು ಅವನ ಆಂತರಿಕ ಗೊಂದಲಗಳಿಗೆ ಅವನೇ ಪರಿಹಾರ,ಒಂದೇ ಮನೆಯಲ್ಲಿ ಅಪರಿಚರಾಗಿಬಿಡುವ ಜೀವಿಗಳು, ಏಕಾಏಕಿ ಕಾಣೆಯಾದ ಮಗಳ ಹುಡುಕುತ್ತ ಹೊರತು ದೋಸೆ ಸವಿಯುವುದು, ರಮಣ, ಅವನ ಪಾತ್ರಗಳು, ಸಾವಿನ ಮುಕ್ತಿ ಸಕೀನಾಳ ಮುತ್ತು ಆಗುವ ಅವನ ಬರವಣಿಗೆ, ಮನೆಯೊಳಗೇ ಯಾರೋ ಬಂದು ಹೋದ ಅಪರಿಚಿತ ಹೆಜ್ಜೆಗಳು ಅದನ್ನು ಬೆನ್ನಟ್ಟಿ ಹೋದಾಗ ಸಿಗುವ ನೀಲುವಿನ ಪತ್ರ, ಕರಿಮಣಿ, ಹೀಗೆ ಎಲ್ಲವು ಬೇರೇನೋ ಹೇಳಲು ಹೊರಟಿವೆ ಅವು ನಮಗೆ ಎಷ್ಟು ತಾಕುತ್ತವೆ ಅನ್ನುವ ಮೇಲೆ ಈ ಕಾದಂಬರಿ ನಿಂತಿದೆ . ಅಸಲು ಬರೆಯುವುದೆಲ್ಲ ಓದುವುದೆಲ್ಲ ಶ್ರೇಷ್ಠವೇ ಆಗಿರಬೇಕು ಎಂಬ ವ್ಯಸನ ನಮಗೆ ಯಾಕೆ ಹತ್ತಿದೆ ?!

    ನನಗಂತೂ ಇಷ್ಟವಾಯ್ತು .

    ಯಾವ ನೀರಿಕ್ಷೆಗಳಿಲ್ಲದೆ ಓದಿದ್ದಕ್ಕ? ಅಲ್ಲಿ ಬಂದು ಹೋದ ರಮಣ ನಿಂದನ? ಕೇವಲ ೧೪೪ ಪುಟಗಳಿವೆ ಅಂತಾನಾ ? ಇಲ್ಲ ಈ ಕಾದಂಬರಿಯಲ್ಲಿರುವ ಈ ತರದ ಸಾಲುಗಳಿಂದಲೇ ?ಇಡೀ ಕಾದಂಬರಿಯ ಆತ್ಮ ಕಾದಂಬರಿಯ ಮೊದಲ ಸಾಲೇ " ಕಾಕತಾಳೀಯವೆಂಬುದಿಲ್ಲ , ಕೆಲವು ಘಟನೆಗಳ ಹಿಂದಿನ ಸಂಬಂಧ ಸೂತ್ರಗಳು ನಮಗೆ ಗೋಚರಿಸುವುದಿಲ್ಲ ಅಷ್ಟೇ "

    "ಒಂದೆರಡು ವಾರಗಳಲ್ಲಿ ಒಂದೊಂದೊಂದಾಗಿ ಶಬ್ದಗಳು ತಮ್ಮ ಅರ್ಥಗಳನ್ನು ಬಿಟ್ಟುಕೊಡತೊಡಗಿ ,ಅದು ಸರಾಗವಾಗಿ ಓದುವ ಹಂತ ತಲುಪುತ್ತಿತ್ತು. ಆ ಅಡ್ಡ ಗೆರೆಗಳಿಂದ ಲಿಪಿಯನ್ನು, ಲಿಪಿಯಿಂದ ಶಬ್ದಗಳನ್ನು, ಶಬ್ದಗಳಿಂದ ಅರ್ಥವಿರುವ ವಾಕ್ಯಗಳನ್ನು, ವಾಕ್ಯಗಳಿಂದ ಭಾವಾರ್ಥಗಳನ್ನು ಕಟ್ಟುವುದೆಂದರೆ ನಾಗರಿಕತೆಯಲ್ಲಿ ಭಾಷೆಯು ಬೆಳೆದುಬಂದ ಇದ್ದೀಯ ಪ್ರಯಾಣವನ್ನು ಹೃಸ್ವದಲ್ಲಿ ಹಾದುಹೊದ ಹಾಗಾಗುತ್ತಿತ್ತು "

  • ವಿಧಿ

    ಹೆಸರಿಗೂ ಪುಸ್ತಕಕ್ಕೂ ಯಾವುದೇ ಕಾರಣಕ್ಕೂ ಸಂಬಂಧವಿಲ್ಲ. ಅನೇಕ ಪ್ರಶ್ನೆಗಳನ್ನು ಹಾಗೆಯೇ ಉಳಿಸಿ ಮುಗಿದು ಹೋದ ಪುಸ್ತಕದಲ್ಲಿ ಒಂದು ಪ್ರಶ್ನೆ ಹೆಸರಿಗೂ ಸಂಭಂದ ಪಡುವಂತದ್ದು. ಲೇಖಕರು ಏನೋ ಹೇಳಲು ಹೊರಟಿರುವುದು ಅಪೂರ್ಣ ಅನಿಸ್ತು. ಒಟ್ಟಾರೆ ಅನೇಕ ಪ್ರಶ್ನೆಗಳನ್ನು ಓದುಗರಿಗೆ ಉಳಿಸಿ ಹೋದಂತಹ ಅನುಭವ.
    ಧನ್ಯವಾದಗಳು.

  • Mallikarjuna M

    ದೀರ್ಘವಾದ, ಒಂದೆರಡಾದರೂ ತಲೆಮಾರುಗಳ ಸುಖಾಂತ್ಯ ಅಥವಾ ದುಃಖಾಂತ್ಯದ ಕಾದಂಬರಿಗಳನ್ನು ಓದಿ ಅಭ್ಯಾಸವಿದ್ದ ನನಗೆ ವಿವೇಕ ಶಾನಭಾಗರ "ಸಕೀನಾಳ ಮುತ್ತು" ಕಾದಂಬರಿ ಒಂದು ಹೊಸ ಅನುಭವ ನೀಡಿದಲ್ಲದೇ ಒಂದು ಹೊಸ ಬಗೆಯ ಸಾಹಿತ್ಯ ಪ್ರಕಾರವೇ ಅನ್ನಿಸಿದೆ.

    144 ಪುಟಗಳ ಈ ಕಾದಂಬರಿ ಹಲವು ಪಾತ್ರ, ಘಟನೆ, ಸನ್ನಿವೇಶ ಮತ್ತು ಸಾಧ್ಯತೆಗಳಿವೆ. ಆದರೆ ಲೇಖಕರು ವೆಂಕಟನ ಮೂಲಕ ಅವನ ದೃಷ್ಟಿಕೋನದಲ್ಲಿ ಕತೆ ಹೇಳಿಸಿ ಖಂಡಿತವಾಗಿಯೂ ಓದುಗನೆಂಬ ವಿಕ್ರಮನನ್ನು ಹಲವು ಸಾಧ್ಯತೆಗಳು ಬೇತಾಳಗಳಾಗಿ ಕಾಡುವಂತೆ ಮಾಡಿರುತ್ತಾರೆ.

    ಸಶೇಷ(?)ವೇನ್ನಿಸುವ ಈ ಕೃತಿಯನ್ನು ಓದುಗ ರೇಖಾಳ ಅಥವಾ ವಿಜಿಯ ದೃಷ್ಟಿಕೋನದಲ್ಲಷ್ಟೇ ಅಲ್ಲದೆ ಹಲವು ಸಾಧ್ಯತೆಗಳ ಗ್ರಹಿಕೆಯಲ್ಲಿ ತನ್ನದೇ ಹೊಸ ಕತೆ ಹೆಣೆಯಬಹುದು.

    P.S. ಇದು ಬಾಲಿಶವೇನಿಸಿದರೂ, ಈ ಕಾದಂಬರಿಯನ್ನು ಓದಿ ಮುಗಿಸಿದ ರಾತ್ರಿ ನನ್ನ ಕನಸಿನಲ್ಲಿ ಕ್ರಾಂತಿಕಾರಿಯಾಗುತ್ತಿದ್ದ ಮಗಳನ್ನು ವೆಂಕಟ ಒಪ್ಪಿಸಿ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಕಳುಹಿಸಿ ಬಿಡುತ್ತಾನೆ 😁😊

  • Soumya

    Bookನ ಹೆಸರಿಗೂ book ಅಲ್ಲಿ ಇರುವ ಕಥೆಗೂ ಸಂಬಂಧನೆ ಇಲ್ಲ.
    ಆದ್ರೆ ಯಾಕೆ ಆ ಹೆಸ್ರು ಅಂತ ತಿಳಿಯಬೇಕಾದರೆ book ಓದಲೇ ಬೇಕು. Infact ಕಥೆಯಲ್ಲಿ ಆ ಭಾಗ ಬಂದ ನಂತರ ಕಥೆ full accelarate ಆಗ್ತಾ ಹೋಗತ್ತೆ.
    ವೆಂಕಟ್, ವಿಜಿ, ರೇಖಾ ಹೀಗೆ ಎಲ್ಲಾ ಪಾತ್ರಗಳು ತಲೆಯಲ್ಲಿ ಉಳಿಯತ್ತೆ.
    ಕಥೆಯ ಕೊನೆ ನಮಗೆ ಬಿಟ್ಟದ್ದು ಅನ್ನೋ ರೀತಿ ಅಲ್ಲಿ ಮುಗಿಸಿದ��ದು ಚೆನ್ನಾಗಿ ಅನ್ನಿಸಿತು.

  • Madhu B

    ಮೊದಲ ಎರಡು ಅಧ್ಯಾಯ ನಿದಾನ ಗತಿಯಲ್ಲಿ ಸಾಗುತ್ತೆ. ಒಮ್ಮೆ ಮಾವ ರಮಣನ ಕಥೆ ಶುರು ಆದಮೇಲೆ ವೇಗ ಪಡೆಯುತ್ತೆ. ನನ್ನಲ್ಲಿ ದಿಗಿಲು ಹುಟ್ಟಿಸಿದ್ದು ಇಂದಿನ ಮಕ್ಕಳನ್ನು ನಾವು ಸಾಕುವಾಗ ಎಲ್ಲಿಯಾದರೂ ನಾವು ಎಡವಿದರೆ...!!ಅತಿಯಾದ ಸ್ವಾತಂತ್ರವು ಅವರಿಗೆ ಮುಳುವಾಗುತ್ತೆಯೋ ?. ಮಧ್ಯ ವಯಸ್ಕ ತಂದೆಯು ಅನುಭವಿಸುವ ತುಮುಲಗಳನ್ನು ವೆಂಕಟ್ ರ ಮೂಲಕ ಚೆನ್ನಾಗಿ ವಿವರಿಸಿದ್ದಾರೆ...
    ವಿವೇಕರೇ ಹೇಳುವಂತೆ "ಕಾಕತಾಳೀಯವೆಂಬುದಿಲ್ಲ, ಕೆಲವು ಘಟನೆಗಳ ಹಿಂದಿನ ಸಂಬಂಧಗಳು ನಮಗೆ ಗೋಚರಿಸುವುದಿಲ್ಲ". ವೆಂಕಟರ ಮನೆಯಲ್ಲಿ ನೆಡೆದ ಕಳ್ಳತನಕ್ಕೂ, ಮಗಳು ರೇಖಾಳಿಗೂ ಅಥವಾ ಮಾವನ ಪ್ರೇಯಸಿ ನೀಲಾಳಿಗೂ ಸಂಬಂಧವಿತ್ತೇ...?.

  • Aishwarya Bhat

    ಪುಸ್ತಕ ಓದಿ ಮುಗಿಸಿದ ಮೇಲೂ ಸಕೀನಾ ಯಾರೆಂಬುದು ತಿಳಿಯಲಿಲ್ಲ. ಅದು ಲೇಖಕರ ಉದ್ದೇಶವು ಕೂಡ.
    ಆಗೆಂದು ಪುಸ್ತಕ ಅಷ್ಟಕಷ್ಟೆ ಅಲ್ಲವೇ ಅಲ್ಲ. ಸಾಕಷ್ಟಿದೆ ಪುಸ್ತಕದಲ್ಲಿ.
    ಒಂದೆ ದೃಷ್ಠಿಕೋನದಲ್ಲಿ ನಿರೂಪಣೆ ಸಾಗಿದ್ದು ಓದಲು ಅನುಕೂಲವಾಯಿತ್ತಾದರೂ ಕೊಂಚ ಇನ್ನೇನೊ ಬೇಕಿತ್ತು ಎನ್ನಿಸುವಷ್ಡರಲ್ಲಿ ಲೇಖಕರು,ಓದುಗನ ನಿರ್ಧಾರಕ್ಕೆ ಸಾಕಷ್ಟು ಪ್ರಶ್ನೆಗಳನ್ನು ತರೆದಿಡುವ ಜಾಣ್ಮೆ ತೋರಿದ್ದು ಹಿಡಿಸಿತು. ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ಪುಸ್ತಕ ಓದಿದರೆ ಖಂಡಿತ ಹಿಡಿಸುತ್ತದೆ. ಆದರೂ ಕೊಂಚ ಇನ್ನೇನೊ ಬೇಕಿತ್ತು!

  • ಪ್ರಕಾಶ್ ನಾಯಕ್

    ಬದುಕನ್ನು ಸುಗಮಗೊಳಿಸಲು ಒಳದಾರಿಗಳನ್ನು ಹುಡುಕುವ ಆತುರದಲ್ಲಿ ಗಮ್ಯವನ್ನು ಮರೆತುಬಿಡುವ ಅಪಾಯವನ್ನು
    ಮನಗಾಣಿಸುವ ಪ್ರಯತ್ನ.